ಶೇಷಾದ್ರಿ, ಪಿ
1963-. ಕನ್ನಡ ಚಲನಚಿತ್ರದ ಪ್ರತಿಭಾವಂತ ಯುವ ನಿರ್ದೇಶಕ. ಮೊಟ್ಟ ಮೊದಲ ಚಿತ್ರ ಮುನ್ನುಡಿ (2000) ರಾಷ್ಟ್ರಮಟ್ಟದಲ್ಲಿ, ರಾಜ್ಯಮಟ್ಟದಲ್ಲಿ ಪ್ರಶಸ್ತಿಗಳಿಸಿತು. ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿತು. ಶೇಷಾದ್ರಿ ಹುಟ್ಟಿದ್ದು ತುಮಕೂರು ಜಿಲ್ಲೆಯ ದಂಡಿನಶಿವರದಲ್ಲಿ, 1963ರ ನವೆಂಬರ್ 22ರಂದು. ತಂದೆ ಡಿ.ಸಿ.ಪಟ್ಟಾಭಿರಾಮಯ್ಯ, ಶಿಕ್ಷಕರು. ತಾಯಿ ಕಮಲಮ್ಮ, ಗೃಹಿಣಿ. ಪ್ರಾಥಮಿಕ ಶಿಕ್ಷಣ ಹುಟ್ಟೂರಿನಲ್ಲೇ. ಕನ್ನಡ ಸಾಹಿತ್ಯದಲ್ಲಿ ಬಾಲ್ಯದಿಂದಲೇ ಅಭಿರುಚಿ, ಆಸಕ್ತಿ. ಮೈಸೂರು ವಿಶ್ವವಿದ್ಯಾನಿಲಯದ ಕನ್ನಡ ಸಾಹಿತ್ಯ ಸ್ನಾತಕೋತ್ತರ ಪದವೀಧರ. ಪತ್ರಿಕೋದ್ಯಮದಲ್ಲಿ ಡಿಪ್ಲೊಮೊ ಪದವಿ ಪಡೆದಿರುವ ಯುವಕ. ವೃತ್ತಿ ಜೀವನ ಪ್ರಾರಂಭಿಸಿದ್ದು ಬೆಂಗಳೂರಿನಲ್ಲಿ, ಪತ್ರಕರ್ತನಾಗಿ, ಚಿತ್ರಕಲಾವಿದನಾಗಿ. ಆದರೆ ಆ ವೃತ್ತಿಗೆ ಬಹಳ ದಿನ ಅಂಟಿಕೊಂಡಿರಲಿಲ್ಲ. ಚಲನಚಿತ್ರರಂಗದತ್ತ ಒಲವು. ಕತೆ-ಚಿತ್ರಕತೆ. ಸಂಭಾಷಣಾ ಲೇಖಕರಾಗಿ 1998ರಲ್ಲಿ ಅಶೋಕ ಬಾದರದಿನ್ನಿಯವರ ಗೌರಿಶಂಕರ ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶ. ಚಲನಚಿತ್ರ ನಿರ್ದೇಶನದ ವಿಧಿ-ವಿಧಾನಗಳ ಪರಿಚಯವಾದದ್ದು ಟಿ.ಎಸ್. ನಾಗಾಭರಣರ ಮಾರ್ಗದರ್ಶನದಲ್ಲಿ. 1995ರಲ್ಲಿ ಟಿ.ವಿ. ಧಾರಾವಾಹಿಗಳ ನಿರ್ದೇಶನದ ಮೂಲಕ ಸ್ವತಂತ್ರ ನಿರ್ದೇಶಕನಾಗಿ ರಂಗಪ್ರವೇಶ. ದೂರದರ್ಶನದಲ್ಲಿ 13 ಕಂತುಗಳಲ್ಲಿ ಪ್ರಸಾರವಾದ ಇಂಚರ ಮತ್ತು 75 ಕಂತುಗಳಲ್ಲಿ ಪ್ರಸಾರವಾದ ಕತೆಗಾರ. ಕೆಲವು ಪ್ರಸಂಗಗಳು ಮತ್ತು ಖಾಸಗಿ ವಾಹಿನಿಯಲ್ಲಿ ಪ್ರಸಾರವಾದ ಕಾಮನಬಿಲ್ಲು ಶೇಷಾದ್ರಿ ಅವರಿಗೆ ಈ ಕ್ಷೇತ್ರದಲ್ಲಿ ಒಂದು ಭದ್ರವಾದ ಸ್ಥಾನ ಕಲ್ಪಿಸಿಕೊಟ್ಟವು. ಟಿ.ಎನ್. ಸೀತಾರಾಮ್ ಜೊತೆಗೂಡಿ ನಿರ್ದೇಶಿಸಿದ ಮಾಯಾಮೃಗ ದೂರದರ್ಶನದಲ್ಲಿ 431 ಕಂತುಗಳಲ್ಲಿ ಪ್ರಸಾರವಾಗಿ ಶೇಷಾದ್ರಿ ಜನಪ್ರಿಯ ಧಾರಾವಾಹಿಗಳ ನಿರ್ದೇಶಕರೆಂದು ಗುರುತಿಸಲ್ಪಟ್ಟರು. ನಿಕ್ಷೇಪ, ಕಣ್ಣುಮುಚ್ಚಾಲೆ, ಉಯ್ಯಾಲೆ, ಮೌನರಾಗ ಮತ್ತು ದೂರದರ್ಶನದಲ್ಲಿ ಪ್ರಸಾರವಾದ ಮಾಸ್ತಿ ವೆಂಕಟೇಶ ಐಯ್ಯಂಗಾರ್ಯರ ಕಿರು ಕಾದಂಬರಿ ಆಧಾರಿತ ಸುಬ್ಬಣ್ಣ ಪ್ರಸಿದ್ಧಿಗೆ ಕಾರಣವಾದ ಇತರ ಟಿ.ವಿ. ಧಾರಾವಾಹಿಗಳು.

ಶೇಷಾದ್ರಿ ಕನ್ನಡ ಚಿತ್ರರಂಗ ಪ್ರವೇಶಿಸಿದ್ದು 2000ದಲ್ಲಿ. ಮೊದಲ ಚಿತ್ರ ಮುನ್ನುಡಿ. ಸಾಮಾಜಿಕ ಕಳಕಳಿಯ ಚಿತ್ರವೆಂದು ರಾಷ್ಟ್ರಪ್ರಶಸ್ತಿಯ ಗೌರವ ಅದಕ್ಕೆ ಸಂದಿತು. ಎಚ್.ಜಿ. ದತ್ತಾತ್ರೇಯ ಅತ್ಯುತ್ತಮ ಪೋಷಕ ನಟರೆಂದು ತೀರ್ಪುಗಾರರ ಮೆಚ್ಚುಗೆಗೆ ಪಾತ್ರರಾದರು. ಮುನ್ನುಡಿಗೆ ಕರ್ನಾಟಕ ರಾಜ್ಯ ಸರಕಾರದ ಆರು ಪ್ರಶಸ್ತಿಗಳ ಗೌರವ! ಸಾಮಾಜಿಕ ಕಳಕಳಿಯ ಚಿತ್ರ, ಶ್ರೇಷ್ಠ ನಿರ್ದೇಶಕ (ಪಿ. ಶೇಷಾದ್ರಿ), ಶ್ರೇಷ್ಠ ನಟ (ಎಚ್.ಜಿ. ದತ್ತಾತ್ರೆಯ), ಅತ್ಯತ್ತಮ ಹಿನ್ನಲೆ ಗಾಯಕ (ರಮೇಶ್‍ಚಂದ್ರ), ಅತ್ಯುತ್ತಮ ಶಬ್ದಗ್ರಹಣ (ಎಸ್. ಮಹೇಂದ್ರನ್), ವಸ್ತವಿನ್ಯಾಸ (ಅನುಪಮಾ ಜಬೈದ) ಅತ್ಯುತ್ತಮ ಚಿತ್ರಕಥೆ (ಬೋಳುವಾರ ಮಹಮದ್ ಕುಂಞ). ಇದೇ ಚಿತ್ರದ ನಿರ್ದೇಶನಕ್ಕಾಗಿ  ಕೇರಳದ ಅರವಿಂದನ್ ಪುರಸ್ಕಾರ ಲಭಿಸಿದೆ. 

ಇಸ್ಲಾಂ ನ್ಯಾಯಶಾಸ್ತ್ರದಂತೆ ವ್ಯಭಿಚಾರಿಗಳಿಗೆ ಇಹಪರಗಳೆರಡರಲ್ಲೂ ಭಯಂಕರ ಶಿಕ್ಷೆ ವಿಧಿಸಲಾಗಿದೆ. ಈ ಅಪರಾಧ ಮತ್ತು ಶಿಕ್ಷೆಯಿಂದ ನುಣುಚಿಕೊಳ್ಳಬಯಸುವ ಗಂಡು ನಿಖಾಹ್ ಮತ್ತು ತಲಾಖ್‍ಗಳ ವಿಧಿಗಳನ್ನು ತನಗೆ ಅನುಕೂಲವಾಗುವಂತೆ ಅರ್ಥೈಸಿ ಹೆಣ್ಣುನ್ನು ಭೋಗದ ವಸ್ತುವನ್ನಾಗಿ ಬಳಸಿಕೊಳ್ಳುವುದರ ವಿರುದ್ಧ ಹೆಣ್ಣೊಬ್ಬಳು ಬಂಡಾಯವೇಳುವುದು ಮುನ್ನುಡಿ ಚಲನಚಿತ್ರದ ವಸ್ತು. 

ಶೇಷಾದ್ರಿ ನಿರ್ದೇಶನದ ಅತಿಥಿ 2000-02ನೇ ಸಾಲಿನ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರಪ್ರಶಸ್ತಿ ಮನ್ನಣೆಗೆ ಪಾತ್ರವಾಯಿತು. ಹಿಂಸೆಯೆಂಬುದು ಮಾನವನ ಜನ್ಮಜಾತ ಸಂಗಾತಿ ಮತ್ತು ಶತ್ರು. ಇಂತಹ ಬಹು ಬಲಶಾಲಿಯಾದ ಹಿಂಸೆಯನ್ನು ತನ್ನೊಳಗೆ ಆವಾಹಸಿಕೊಂಡವನಲ್ಲಿ ಮಿಂಚಬಹುದಾದ ಅಹಿಂಸೆಯ ಕಣಗಳನ್ನು ಶೋಧಿಸುವ ಜೊತೆಯಲ್ಲಿ, ಅಹಿಂಸೆಯನ್ನು ಬದುಕಿನ ಪರಮ ಸತ್ಯವೆಂದು ನಂಬಿ ಬದುಕುವ ಸಾಮಾನ್ಯನಲ್ಲೂ ಇಣುಕಬಹುದಾದ ಹಿಂಸೆಯ ತುಣುಕುಗಳನ್ನು ಪರಿಶೀಲನೆಗೆ ಒಡ್ಡುವ ಪ್ರಯತ್ನದ ಒಂದು ಮುಖದ ಪ್ರದರ್ಶನ ಅತಿಥಿಯ ಕಥಾವಸ್ತು. ಮೂರನೆ ಚಿತ್ರ ಬೇರು. ಜನಪರ ನಿಲುವು, ಸೇವಾ ಮನೋಭಾವ ಹಾಗೂ ದಿಟ್ಟತನಗಳ ಅಧಿಕಾರಿಯೇನಾದರೂ ಭ್ರಷ್ಟತೆಯನ್ನು ಎದುರಿಸಲು ಹೊರಟರೆ ಕೊನೆಗೆ ಅದರ ವಿಶ್ವರೂಪದೆದರು ಅವನ ಅಸ್ತಿತ್ವದ ಬೇರು ಅಲುಗಾಡಿ ಭ್ರಷ್ಟತೆಯ ವಿಷಜಾಲದಲ್ಲಿ ಸಿಕ್ಕಿ ಅಸಹಾಯಕನೂ ಆಗಿ ಬಿಡಬಲ್ಲ. ಇಂತಹ ಪರಿಸ್ಥಿತಿಯಲ್ಲಿ ಸಮಾಜಕ್ಕೆ ಆತ್ಮವಿಶ್ವಾಸ ಹಾಗೂ ನೈತಿಕ ಎಚ್ಚರದ ಅಗತ್ಯವನ್ನು ಮನಗಾಣಿಸುವ ಸದುದ್ದೇಶ. ಬೇರು ಚಿತ್ರದ ತಾತ್ವಿಕ ಭಿತ್ತಿ. ಇದು 2004ರ ಅತ್ಯುತ್ತಮ ಪ್ರಾದೇಶಿಕ ಚಿತ್ರವೆಂದು ರಾಷ್ಟ್ರ ಪ್ರಶಸ್ತಿ ಪಡೆಯಿತು ಹಾಗೂ ಅತ್ಯುತ್ತಮ ದ್ವಿತೀಯ ಚಿತ್ರವೆಂದು ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪ್ರಾಪ್ತವಾಯಿತು. ಶೇಷಾದ್ರಿಯವರು ನಿರ್ದೇಶಿಸಿದ ಮೊದಲ ಮೂರು ಚಿತ್ರಗಳು ರಾಷ್ಟ್ರೀಯ ಹಾಗೂ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪ್ರಾಪ್ತವಾದವು. ಇದೊಂದು ಗಣನೀಯ ಅಂಶ. 
ಇವರ ನಾಲ್ಕನೇ ಚಿತ್ರ ತುತ್ತೂರಿ ಇದು ಮಕ್ಕಳ ಚಿತ್ರವಾಗಿರುವುದು ಇನ್ನೊಂದು ವಿಶೇಷ. ಇವರ ಎಲ್ಲಾ ಚಿತ್ರಗಳೂ ಹಲವಾರು ಅಂತರರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡು ಮೆಚ್ಚುಗೆ ಗಳಿಸಿವೆ. 

ಶೇಷಾದ್ರಿ ಟಿ.ವಿ. ಧಾರಾವಾಹಿಗಳು, ಕಥಾಚಿತ್ರಗಳಲ್ಲದೆ, ಕೆಲವು ಗಣನೀಯ ಸಾಕ್ಷ್ಯಚಿತ್ರಗಳನ್ನೂ ನಿರ್ಮಿಸಿದ್ದಾರೆ. ದೇವುಡು ನರಸಿಂಹ ಶಾಸ್ತ್ರೀ ಮತ್ತು ಎ.ಎನ್ ಮೂರ್ತಿರಾಯರ ಕುರಿತು ಇವರ ನಿರ್ಮಿಸಿದ ಸಾಕ್ಷ್ಯ ಚಿತ್ರಗಳು ದೂರದರ್ಶನದಲ್ಲಿ ಪ್ರಸಾರವಾಗಿವೆ. 	
									
(ಎಂ.ಬಿ.ಎಸ್)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ